ರೂರ್ಕೆಲ
ಭಾರತದ ಒರಿಸ್ಸ ರಾಜ್ಯದ ಉತ್ತರದಲ್ಲಿರುವ ಸುಂದರ್‍ಘರ್ ಜಿಲ್ಲೆಯ ಒಂದು ಕೈಗಾರಿಕಾ ನಗರ. ಸುಂದರ್‍ಘರ್ ಪಟ್ಟಣದ ಪೂರ್ವಕ್ಕಿರುವ ಈ ನಗರ ಬಿಹಾರ್ ರಾಜ್ಯದ ಗಡಿ ಸಮೀಪದಲ್ಲಿದೆ. ಈ ನಗರದ ಉತ್ತರದಲ್ಲಿ ಕೋಯಲ್ ನದಿಯೂ ಪಶ್ಚಿಮದಲ್ಲಿ ಶಂಖ ನದಿಯೂ ನೈಋತ್ಯದಲ್ಲಿ ಬ್ರಾಹ್ಮಣಿ ನದಿಯೂ ಸುತ್ತುವರೆದಿವೆ. ಈಗ ರೂರ್ಕೆಲ ಒರಿಸ್ಸದ ಹಿಂದಿನ ರಾಜಧಾನಿಯಾಗಿದ್ದ ಕಟಕ್ ನಗರವನ್ನೂ ಮೀರಿಸಿ ಬೆಳೆದಿದೆ. ಬ್ರಜ್‍ರಾಜ್‍ನಗರ್, ರಾಜ್ ಗಂಗೌರ್, ರೂರ್ಕೆಲ ಮತ್ತು ಚೌದ್ವಾರ್ ಒರಿಸ್ಸದ ನಾಲ್ಕು ಪ್ರಮುಖ ಕೈಗಾರಿಕಾ ಕೇಂದ್ರಗಳು. ಉಕ್ಕಿನ ಉತ್ಪಾದನೆಗೆ ಬೇಕಾದ ಕಚ್ಚಾಸಾಮಗ್ರಿಗಳು, ವಿದ್ಯುತ್, ಮಾರುಕಟ್ಟೆ - ಈ ಮೂರೂ ಸೌಲಭ್ಯಗಳು ರೂರ್ಕೆಲಕ್ಕೆ ಬಹು ಕಡಿಮೆ ಸಾಗಣೆ ವೆಚ್ಚದಲ್ಲಿ ದೊರಕಿರುವುದು ಇಲ್ಲಿನ ಕೈಗಾರಿಕೆಯ ಅಭಿವೃದ್ಧಿಗೆ ಮುಖ್ಯ ಕಾರಣಗಳಾಗಿವೆ. ಸು.141 ಕಿಮೀ ದೂರದಲ್ಲಿರುವ ಹಿರಾಕುಡ್ ಜಲವಿದ್ಯುತ್ ಕೇಂದ್ರದಿಂದ ರೂರ್ಕೆಲ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜಾಗುತ್ತಿದೆ. ಇಲ್ಲಿನ ಉಕ್ಕು ಕಾರ್ಖಾನೆಗೆ ಪ್ರತಿದಿನ ಸು.590 ಮಿಲಿಯನ್ ಲೀಟರ್ ನೀರು ಶಂಖ ಮತ್ತು ಕೋಯಲ್ ನದಿಗಳಿಂದ ಸರಬರಾಜಾಗುತ್ತಿದೆ. ಹೆಚ್ಚುವರಿ ಬೇಕಾಗುವ ನೀರಿಗಾಗಿ ಶಂಖ ನದಿಗೆ ಕಟ್ಟಿರುವ ಮಂದಿರ ಜಲಸಂಗ್ರಹಾಲಯದಿಂದ ಒದಗಿಸಿಕೊಳ್ಳಲಾಗುತ್ತಿದೆ. ವಿಮಾನ ಸಂಪರ್ಕವೂ ಸೇರಿದಂತೆ ನಗರಕ್ಕೆ ಉತ್ತಮ ಸಾರಿಗೆ ಮತ್ತು ಸಂಪರ್ಕ ಸಾಧನಗಳಿವೆ. 

	ಈ ನಗರದ ಪ್ರಥಮ ನೀಲನಕ್ಷೆಯನ್ನು ಜರ್ಮನಿಯ ತಂತ್ರಜ್ಞರು ರೂಪಿಸಿದ್ದರು. ಈತ ಎಲ್ಲಾ ವಿಧದಲ್ಲೂ ಸ್ವಾವಲಂಬಿ ಎನಿಸಿ ಭಾರತದ ಸುಂದರ ನಗರವೆನಿಸಿದೆ. ರೂರ್ಕೆಲ ಉಕ್ಕು ಕಾರ್ಖಾನೆಗೆ ಝರಿಯಾ ಗಣಿಗಳಿಂದ ಕಲ್ಲಿದ್ದಲೂ ತಾಲ್ಡಿಹ ಎಂಬ ಸ್ಥಳದಿಂದ ಮೂಲ ಕಚ್ಚಾ ವಸ್ತುವಾದ ಹಿಮಟೈಟ್ ಅದುರೂ ಹೇರಳವಾಗಿ ಸರಬರಾಜಾಗುತ್ತದೆ. ಕಬ್ಬಿಣ, ಮ್ಯಾಂಗನೀಸ್, ಸುಣ್ಣಶಿಲೆ ಹಾಗೂ ಡಾಲೋಮೈಟ್‍ಗಳೂ ಸಹ ರೂರ್ಕೆಲದ ಸಮೀಪದಲ್ಲೆ ದೊರೆಯುತ್ತವೆ. ಈ ನಗರದ ಇತರ ಬೃಹತ್ ಕೈಗಾರಿಕೆಗಳಾದ ರಸಗೊಬ್ಬರ ಕಾರ್ಖಾನೆ, ಮರಮುಟ್ಟು ಮತ್ತು ಚರ್ಮ ಹದಮಾಡುವ ಹಾಗೂ ಆಹಾರ ಸಂಸ್ಕರಣದ ಹಲವಾರು ಕಾರ್ಖಾನೆಗಳೂ ಇವೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ